ಕಾಂಬೋಡಿಯ ಇತಿಹಾಸ

ಕಾಂಬೋಡಿಯದ ಪ್ರಾಚೀನ ಇತಿಹಾಸ ಭವ್ಯವಾದದ್ದು. ಖ್ಮರ್ ಸಾಮ್ರಾಜ್ಯದ ವೈಭವದ ಕಾಲದಲ್ಲಿಯಂತೂ (9ನೆಯ ಶತಮಾನದಿಂದ 15ನೆಯ ಶತಮಾನದ ವರೆಗೆ) ಇದು ಕಲೆ ಸಂಸ್ಕøತಿಗಳಿಗೆ ಸಲ್ಲಿಸಿದ ಕಾಣಿಕೆ ಹಿರಿದು. ಆ ಕಾಲದ ಇತಿಹಾಸ ಕಲೆ ಸಂಸ್ಕøತಿಗಳ ಪರಿಚಯಕ್ಕೆ ಕಂಬುಜವನ್ನು ಕುರಿತ ಲೇಖನಗಳನ್ನು ನೋಡಿ. ಅಲ್ಲಿಂದ ಮುಂದಣ ಇತಿಹಾಸವನ್ನು ಇಲ್ಲಿ ಕೊಟ್ಟಿದೆ.

 1340ರ ವರೆಗೆ ಖ್ಮರ್ ದೊರೆಗಳ ಹೆಸರುಗಳು ವರ್ಮ ಎಂದು ಕೊನೆಗೊಳ್ಳುತ್ತಿದ್ದುವು. ಅಲ್ಲಂದೀಚೆಗೆ ಬದಲಾವಣೆ ಕಂಡುಬರುತ್ತದೆ. 8ನೆಯ ಜಯುವರ್ಮನ ಕಾಲದ (1243-95) ವೇಳೆಗಾಗಲೇ ಖ್ಮರ್ ಸಾಮ್ರಜ್ಯದ ಅವನತಿಯ ಲಕ್ಷಣಗಳು ಕಂಡುಬಂದಿದ್ದುವು. ಥೈಲೆಂಡಿನ ಸುಖೋಥಾಯ್‍ನ ರಾಜ ರಾಮಾಕಂಹೇಂಗ ಕಾಂಬೋಡಿಯದ ಅನೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ. ರಾಜ್ಯದಲ್ಲಿ ಒಗ್ಗಟ್ಟೂ ಇರಲಿಲ್ಲ ಥೈ ಜನರ ಆಕ್ರಮಣವನ್ನು ತಡೆಗಟ್ಟುವುದು ಅಸಾಧ್ಯವಾಗಿತ್ತು. 8ನೆಯ ಜಯವರ್ಮ ಶೈವಮತವನ್ನು ಪುನರುಜ್ಜೀವನಗೊಳಿಸಲು ಮಾಡಿದ ಪ್ರಯತ್ನದಿಂದಾಗಿ ಬೌದ್ಧರುದಂಗೆ ಎದ್ದರು. ರಾಜ ಬಂದಿಯಾದ. ಅವನ ಅಳಿಯ 1295ರಲ್ಲಿ ಅವನನ್ನು ಕೊಲೆ ಮಾಡಿದ. ಬೌದ್ಧ ಮತ ಕ್ರಮೇಣ ಪ್ರಬಲವಾಯಿತು. 1350ರ ಅನಂತರ ಖ್ಮರ್ ಸಾಮ್ರಜ್ಯ, ಥೈಲೆಂಡಿನ ಅಯುತ್ತಿಯ ರಾಜ್ಯದ ಪೂರ್ವದಲ್ಲಿ ತಲೆಯೆತ್ತುತ್ತಿದ್ದ ವಿಯಟ್ನಾಮೀಯರ ಆಕ್ರಮಣವನ್ನು ಎದುರಿಸಬೇಕಾಯಿತು. 1431ರಲ್ಲಿ ಥೈಲೆಂಡಿನ ದಾಳಿಯನ್ನು ಎದುರಿಸಲಾರದೆ ರಾಜಧಾನಿಯನ್ನು ಆಂಗ್ಕೋರ್‍ನಿಂದ ಈಗಿನ ಪನಾಂ-ಪೆನ್ ಪ್ರದೇಶಕ್ಕೆ ಬದಲಾಯಿಸಲಾಯಿತು. ಇದರೊಂದಿಗೆ ಖ್ಮರ್ ಚಕ್ರಾಧಿಪತ್ಯದ ವೈಭವವೂ ಅದರ ಶಿಲ್ಪಕಲಾ ಸಿದ್ಧಿಯೂ ಕೊನೆಗೊಂಡುವೆನ್ನಬಹುದು. ವ್ಯವಸಾಯದಿಂದ ಸಮೃದ್ದಿಯಾಗಿದ್ದ ಉತ್ತರ ಪ್ರದೇಶಗಳು ಹಾಳು ಬಿದ್ದುವು. 1473ರಲ್ಲಿ ಥೈಲೆಂಡಿನವರು ಕೋರಟ್ ಮತ್ತು ಆಂಗ್ಕೋರ್‍ಗಳ ಮೇಲೆ ಆಕ್ರಮಣ ನಡೆಸಿದರು. ದೊರೆ ಬಂದಿಯಾದ. ಅವನನ್ನು ಅವನ ಸಂಸಾರದೊಂದಿಗೆ ಬಾಂಕಾಕಿಗೆ ರವಾನಿಸಲಾಯಿತು. ಅಲ್ಲಿ ಅವನಿಗೆ ಹುಟ್ಟಿದ ಮಗನನ್ನು ಥೈಲೆಂಡಿನವರು ಅನಂತರ ಪಣವಾಗಿಟ್ಟುಕೊಂಡು ಕಾಂಬೋಡಿಯದ ಆಕ್ರಮಣ ಕಾರ್ಯವನ್ನು ಬಲಗೊಳಿಸಿಕೊಂಡರು. ಕಾಂಬೋಡಿಯನರಿಗೂ ಸೈಯಾಮಿಗಳಿಗೊ ಪದೇ ಪದೇ ಯುದ್ಧಸಂಭವಿಸುತ್ತಿತ್ತು. 16ನೆಯ ಶತಮಾನದಲ್ಲಿ ಬರ್ಮೀಯರು ಥೈಲೆಂಡನ್ನು ಮುತ್ತಿದ್ದರಿಂದ ಕಾಂಬೋಡಿಯ 1560ರಿಂದ 1590ರ ವರೆಗೆ ಸ್ವಲ್ಪ ಚೇತರಿಸಿಕೊಂಡಿತು. ಆ ಶತಮಾನದ ನಡುಗಾಲದಲ್ಲಿ ದೊರೆ ಅಂಗ್-ಚಾನ್ ಥೈಲೆಂಡನ್ನು ಸೋಲಿಸಿದ. ಶಾಂತಿ ನೆಲೆಗೊಂಡಿತು. ಆದರೆ ಇದು ಬಹುಕಾಲ ಉಳಿಯಲಿಲ್ಲ. ಥೈಲೆಂಡಿನ ಕಿರುಕುಳ ಮುಂದುವರಿಯಿತು. 1593ರಲ್ಲಿ ಅದು ಗಳಿಸಿದ ಜಯದಿಂದ ಕಾಂಬೋಡಿಯದ ಬೆನ್ನು ಮೂಳೆಯೇ ಮುರಿದು ಬಿದ್ದಂತಾಯಿತು. ಅನಂತರದ ಕಾಲ ಆಂತರಿಕ ಕ್ಷೋಭೆ, ಪಿತೂರಿ ಕೊಲೆಗಳಿಂದ ಕೂಡಿದ್ದು. ಇತ್ತ ಥೈಲೆಂಡೂ ಅತ್ತ ವಿಯೆಟ್ನಾಮೂ ಕಾಂಬೋಡಿಯನ್ನು ಕಾಡಿಸುತ್ತಿದ್ದುವು. ಕ್ರಮಕ್ರಮವಾಗಿ ಕಾಂಬೋಡಿಯದ ಸ್ವಾತಂತ್ರ್ಯ ನಶಿಸಿಹೋಯಿತು. 19ನೆಯ ಶತಮಾನದಲ್ಲಿ ಫ್ರೆಂಚರು ಕಾಂಬೋಡಿಯನ್ನು ವಶಪಡಿಸಿಕೊಳ್ಳುವ ವರೆಗೆ ಖ್ಮರ್ ಸಾಮ್ರಾಜ್ಯ ದಿನೇ ದಿನೇ ಕ್ಷೀಣವಾಗುತ್ತಸಾಗಿತು. ಕಾಂಬೋಡಿಯನರು ಪೂರ್ವದಲ್ಲಿದ್ದ ವಿಯಟ್ನಾಮೀಯರ ಅಥವಾ ಪಶ್ಚಿಮದಲ್ಲಿದ್ದ ಥೈ ಜನಾಂಗದವರ ಅಥವಾ ಅವರಿಬ್ಬರ ಅಧೀನದಲ್ಲಿ ಬಾಳಬೇಕಾಯಿತು. ಪರಾದೀನವಾದ ಕಾಂಬೋಡಿಯ ಮತ್ತೆ ಗತಕಾಲದ ವೈಭವವನ್ನು ಕಾಣಲಿಲ್ಲ. 18ನೆಯ ಶತಮಾನದಲ್ಲಿ ಥೈಲೆಂಡ್ ಕಾಂಬೋಡಿಯದ ಮೂರು ಪ್ರಾಂತ್ಯಗಳನ್ನು ಆಕ್ರಮಿಸಿಕೊಂಡಿತು. ವಿಯಟ್ನಾಮೀಯರು ಕೊಚಿನ್-ಚೀನ ಪ್ರದೇಶವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.

 19ನೆಯ ಶತಮಾನದಲ್ಲಿ ಫ್ರೆಂಚರು ಇಂಡೋಚೀನ ಪ್ರದೇಶದಲ್ಲಿ ತಮ್ಮ ಸಾಮಾಜವಾಹಿ ನೀತಿಯಿಂದ ಒಂದು ಪ್ರಬಲವಾದ ವಸಾಹತನ್ನು ಸ್ಥಾಪಿಸಿದರು, ಥೈಲೆಂಡ್ ಮತ್ತು ವಿಯಟ್ನಾಮೀಯರ ದಾಳಿಯನ್ನು ಸಹಿಸಲಾರದೆ ಕಾಂಬೋಡಿಯ ಫ್ರೆಂಚರ ಸಹಾಯವನ್ನು ಬೇಡಿತು. ಫ್ರೆಂಚರು ಆ ಅವಕಾಶವನ್ನು ಉಪಯೋಗಿಸಿಕೊಂಡು ಕಾಂಬೋಡಿಯದ ರಾಜನಿಗೆ ಸಹಾಯಮಾಡಿ 1863ರಲ್ಲಿ ಆ ದೇಶವನ್ನು ತಮ್ಮ ನಿಯಂತ್ರಣಕ್ಕೆ ಒಳಪಡಿಸಿಕೊಂಡರು. ಅನಂತರ ದೇಶ ಫ್ರೆಂಚ್ ಇಂಡೋಚೀನದ ಒಂದು ಭಾಗವಾಯಿತು. 1907ರಲ್ಲಿ ಸೈಯಾಂ (ಥೈಲೆಂಡಿನ ಆಗಿನ ಹೆಸರು) ಕಾಂಬೋಡಿಯದ ಪ್ರದೇಶಗಳನ್ನು ಹಿಂದಿರುಗಿಸಿತು.

 1930ರ ದಶಕದಲ್ಲಿ ಫ್ರೆಂಚರ ವಿರುದ್ಧ ದೇಶೀಯ ಚಳವಳಿಗಳು ನಡೆದುವು. ಆ ಕಾಲದಲ್ಲೇ ರಾಷ್ಟ್ರೀಯತೆಯ ಭಾವನೆ ಬೆಳೆಯಿತು. ಎರಡನೆಯ ಮಹಾಯುದ್ದದ ಕಾಲದಲ್ಲಿ ಫ್ರೆಂಚ್ ಸರ್ಕಾರ ಜಪಾನಿನ ಬೇಡಿಕೆಗಳಿಗೆ ಒಪ್ಪಿಗೆ ನೀಡಿ ಕಾಂಬೋಡಿಯದಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಲು ಅನುಮತಿ ಕೊಟ್ಟಿತ್ತು. ಸ್ವಲ್ಪಕಾಲ ಜಪಾನರ ಪಕ್ಷ ಸೇರಿದ ಥೈಲೆಂಡ್ ಕಾಂಬೋಡಿಯದ ಪ್ರದೇಶಗಳನ್ನು ಆಕ್ರಮಿಸಿಕೊಂಡಿತು. ಈ ಘಟನೆಗಳಿಂದಾಗಿ ದೇಶದಲ್ಲಿ ಫ್ರೆಂಚರ ವಿರುದ್ಧ ಭಾವನೆಗಳು ತಲೆ ಎತ್ತಿದುವು. 1941ರಲ್ಲಿ ಜಪಾನ್ ಕಾಂಬೋಡಿಯದಲ್ಲಿದ್ದ ಫ್ರೆಂಚರ ಆಡಳಿತವನ್ನು ಕೊನೆಗೊಳಿಸಿತು. ತನ್ನ 18ನೆಯ ವರ್ಷದಲ್ಲಿ, ಪಟ್ಟಕ್ಕೆ ಬಂದಿದ್ದ ದೊರೆ ನರೋದಮ್ ಸಿಹಾನೌಕ್ ಫ್ರಾನ್ಸಿನೊಡನೆ ಇದ್ದ ಎಲ್ಲ ಒಪ್ಪಂದಗಳನ್ನೂ ಕೊನೆಗೊಳಿಸಿದ.

 ಎರಡನೆಯ ಮಹಾಯುದ್ದದಲ್ಲಿ ಜಪಾನ್ ಸೋತ ಮೇಲೆ, ಫ್ರೆಂಚರು ಪುನಃ ತಮ್ಮ ಅಧಿಕಾರವನ್ನು ಕಾಂಬೋಡಿಯದ ಮೇಲೆ ಸ್ಥಾಪಿಸಿದರು. ಆದರೆ ಕಾಂಬೋಡಿಯ ಒಳಾಡಳಿತದಲ್ಲಿ ಹೆಚ್ಚಿನ ಸ್ವಾತಂತ್ರ್ಯವನ್ನು ಪಡೆಯಿತು. 1947ರಲ್ಲಿ ಅದು ಸಂವಿಧಾನಬದ್ಧ ರಾಜ್ಯವೆಂದು ಘೋಷಿತವಾಯಿತು. 1949ರಲ್ಲಿ ಕಾಂಬೋಡಿಯಾ ಫ್ರೆಂಚ್ ಒಕ್ಕೂಟದ ಒಂದು ಅಂಗವಾಯಿತು. 1953ರಲ್ಲಿ ಇಂಡೋಚೀನದ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಹಾನೌಕ್ ಸಂಪೂರ್ಣ ಮಿಲಿಟರಿ ಅಧಿಕಾರ ಪಡೆದ. 1950ರಲ್ಲಿ ಉತ್ತರ ವಿಯೆಟ್ನಾಂ ಯುದ್ಧಕಾರ್ಯಾಚರಣೆಯಿಂದಾಗಿ ಕಾಂಬೋಡಿಯದಲ್ಲಿ ಆಂತರಿಕ ಶಾಂತಿಗೆ ಧಕ್ಕೆ ಬಂತು. 1954ರ ವೇಳೆಗೆ ಇಡೀ ಇಂಡೋಚೀನದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದುದರಿಂದ 1954ರಲ್ಲಿ ಜಿನೀವ ಸಮ್ಮೇಳನ ನಡೆಯಿತು. ವಿಶ್ವದ ಅಗ್ರ ರಾಷ್ಟ್ರಗಳು ಕಾಂಬೋಡಿಯದ ತಟಸ್ಥ ನೀತಿಯನ್ನೂ ರಾಜ್ಯದ ಮೇರೆಗಳನ್ನೂ ರಕ್ಷಿಸುವ ಭರವಸೆ ನೀಡಿದುವು. 1955ರಲ್ಲಿ ಸಿಹಾನೌಕ್ ಸಿಂಹಾಸನವನ್ನು ತನ್ನ ತಂದೆಗೆ ಬಿಟ್ಟುಕೊಟ್ಟು ಸಮಾಜವಾದಿ ಪ್ರಜಾಸಮುದಾಯ ಪಕ್ಷ ಸ್ಥಾಪಿಸಿ, ಚುನಾವಣೆಗೆ ನಿಂತು ಗೆದ್ದು ಪ್ರಧಾನಿಯಾದ. ಆ ವರ್ಷವೇ ಫ್ರೆಂಚ್ ಒಕ್ಕೂಟದಿಂದ ಕಾಂಬೋಡಿಯ ಹೊರಬಂದು, ಸ್ವತಂತ್ರ ರಾಷ್ಟ್ರವೆಂದು ಘೋಷಿಸಿಕೊಂಡಿತು. 1960ರಲ್ಲಿ ತನ್ನ ತಂದೆ ಗತಿಸಿದುದರಿಂದ ಸಿಹಾನೌಕ್ ದೇಶದ ನಾಯಕನಾಗಿ ನೇಮಕ ಹೊಂದಿದ.

 1960 ರಿಂದ 1970ರ ಮೊದಲ ಭಾಗದ ವರೆಗೆ ಸಿಹಾನೌಕ್ ಕಾಂಬೋಡಿಯದ ಅಧ್ಯಕ್ಷನಾಗಿದ್ದ. 1960ರಲ್ಲಿ ಆ ದೇಶದ ಆರ್ಥಿಕ ಅಭಿವೃದ್ಧಿ ಸಾಧನೆಗೆ ಮೊದಲ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಸರ್ಕಾರ ತಟಸ್ಥ ನೀತಿಯನ್ನು ಪಾಲಿಸುತ್ತಿತ್ತಾದರೂ ಉತ್ತರ ದಕ್ಷಿಣ ವಿಯೆಟ್ನಾಂ ಯುದ್ಧದ ಪರಿಣಾಮವಾಗಿ ಅದರ ಸ್ಥಿತಿ ಕಠಿಣವಾಯಿತು. ಕಮ್ಯೂನಿಸ್ಟ್ ಚೀನದೊಡನೆ ರಾಜತಾಂತ್ರಿಕ ಸಂಬಂಧ ಬೆಳೆಯಿತು. ಅಮೆರಿಕ ಕೊಡುತ್ತಿದ್ದ ಮಿಲಿಟರಿ ಮತ್ತು ಆರ್ಥಿಕ ನೆರವುಗಳನ್ನು ಕಾಂಬೋಡಿಯ 1963ರಲ್ಲಿ ತಿರಸ್ಕರಿಸಿತಲ್ಲದೆ 1965ರಲ್ಲಿ ಅಮೆರಿಕದೊಡನೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಕೊಂಡಿತು. ಜೂನ್ 1967ರಲ್ಲಿ ಸೋವಿಯತ್ ರಷ್ಯ ಮತ್ತು ಇತರ ಕಮ್ಯೂನಿಸ್ಟ್ ದೇಶಗಳು ಕಾಂಬೋಡಿಯದ ಮೇರೆಗಳನ್ನು ಒಪ್ಪಿದುವು 1968ರ ಮೊದಲ ಭಾಗದಲ್ಲಿ ದೇಶದಲ್ಲಿ ಚುನಾವಣೆ ನಡೆಸಲು ಸಿದ್ಧತೆ ನಡೆದಿತ್ತು. ಇದು ಹೊಸ ವಿದೇಶಾಂಗನೀತಿಯ ಸಂಕೇತವಾಗುವಂತೆ ಕಾಣುತ್ತಿತ್ತು. ವಿಯಟ್‍ಕಾಂಗರು ದಕ್ಷಿಣ ವಿಯೆಟ್ನಾಂ ವಿರುದ್ಧ ಹೋರಾಟದಲ್ಲಿ ಕಾಂಬೋಡಿಯ ಪ್ರದೇಶ ಬಳಸಿಕೊಳ್ಳಲಾರಂಭಿಸಿದರು. ಅಂಥವನ್ನು ನೆಲೆಗಳನ್ನು ನಾಶಮಾಡಲು ಅಮೆರಿಕನ್ ಮತ್ತು ವಿಯಟ್ನಾಂ ಸೈನಿಕರು ಹಲವಾರು ಬಾರಿ ಕಾಂಬೋಡಿಯಕ್ಕೆ ಸೇರಿದ ಪ್ರದೇಶಗಳಿಗೆ ಅನಧಿಕೃತವಾಗಿ ಪ್ರವೇಶ ಮಾಡಿದರು. ಸಿಹಾನೌಕ್ ಈ ಬಣಗಳ ಮಧ್ಯೆ ತನ್ನ ತಟಸ್ಥ ನೀತಿಯನ್ನು ಪಾಲಿಸಲು ಅಸಾಧ್ಯವೇ ಆಯಿತೆನ್ನಬಹುದು.

 ಇದಲ್ಲದೆ ಕಾಂಬೋಡಿಯದ ಆಂತರಿಕ ವಿಷಯಗಳಲ್ಲಿ ಸಿಹಾನೌಕನ ಧೋರಣೆ ಅನೇಕರಿಗೆ ಹಿಡಿಸಲಿಲ್ಲ. ಯುದ್ಧ ವಾತಾವರಣದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಸಿಹಾನೌಕ್ ಪ್ಯಾರಿಸಿಗೆ ಹೋಗಿದ್ದ ಸಮಯದಲ್ಲಿ 1970ರ ಮಾರ್ಚಿಯಲ್ಲಿ ಸೈನ್ಯಾಧಿಕಾರಿ ಲೋನ್ ನಾಲ್ ಸಿಹಾನೌಕನನ್ನು ಪದಚ್ಯುತನನ್ನಾಗಿ ಮಾಡಿದ. ಸಿಹಾನೌಕನಿಗೆ ಚೀನದ ಬೆಂಬಲ ದೊರಕಿತು. ಕಾಂಬೋಡಿಯ ಅಂತರ್ಯುದ್ಧಕ್ಕೆ ಒಳಗಾಯಿತು. ಲೋನ್ ನಾಲ್ ಕಾಂಬೋಡಿಯವನ್ನು ಗಣರಾಜ್ಯವೆಂದು ಘೋಷಿಸಿ ರಾಜಪ್ರಭುತ್ವವನ್ನು ಕೊನೆಗೊಳಿಸಿದ. ಸಿಹಾನೌಕನ ಬೆಂಬಲಿಗರಾದ ಉತ್ತರ ವಿಯಟ್ನಾಮೀಯರು ಕಾಂಭೋಡಿಯದ ಮೇಲೆ ದಾಳಿ ನಡೆಸಿದರು. ಅಮೆರಿಕನರು ಹಲವಾರು ವಾರಗಳ ಕಾಲ ಮಧ್ಯೆ ಪ್ರವೇಶಿಸಿ ಲೋನ್‍ನಾಲನಿಗೆ ಬೆಂಬಲ ನೀಡಿ, ಅನಂತರ ಸೈನ್ಯವನ್ನು ವಾಪಸು ಕರೆಸಿಕೊಂಡರು.

(ಎಂ.ವಿ.ಕೆ.; ಎಸ್.ಕೆ.ಎಸ್.; ಎಂ.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ